ವೆಂಕಟಾಚಲಶಾಸ್ತ್ರೀ, ಟಿ ವಿ - 
ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಅತ್ಯಗತ್ಯವಾದ ವ್ಯಾಕರಣ ಛಂದಸ್ಸು, ಅಲಂಕಾರಶಾಸ್ತ್ರಗಳಲ್ಲಿ, ಪ್ರಾವೀಣ್ಯ, ಅಧಿಕಾರವಾಣಿ ಪಡೆದ ಅಗ್ರಗಣ್ಯ ವಿದ್ವಾಂಸರು. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ಬೆಂಗಳೂರು ಜಿಲ್ಲೆಯ ಕನಕಪುರದಲ್ಲಿ 1933ರ ಆಗಸ್ಟ್ 26ರಂದು ಜನಿಸಿದರು. ತಂದೆ ತೋಗರೆ ವೆಂಕಟಸುಬ್ಬಾಶಾಸ್ತ್ರಿ, ತಾಯಿ ಸುಬ್ಬಮ್ಮ ಕನಕಪುರದಲ್ಲಿಯೇ ಅವರು ತಮ್ಮ  ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ಮೈಸೂರು ವಿಶ್ವವಿದ್ಯಾನಲಯದಿಂದ 1953ರಲ್ಲಿ ಕನ್ನಡದಲ್ಲಿ ಬಿ.ಎ. ಆನರ್ಸ್ ಪದವಿಯನ್ನು, 1954ರಲ್ಲಿ ಕನ್ನಡ ಎಂ.ಎ. ಪದವಿಯನ್ನು, 1972ರಲ್ಲಿ ತಮ್ಮ `ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದರು. ಕುವೆಂಪು, ಡಿ.ಎಲ್ ನರಸಿಂಹಾಚಾರ್, ತ.ಸು.ಶಾಮರಾಯ, ಎಸ್.ವಿ. ಪರಮೇಶ್ವರ ಭಟ್ಟ ಅವರ ಗುರುವೃಂದದ ಮುಖ್ಯರು. ಶಾಸ್ತ್ರಿಗಳು ಆರಂಭದಲ್ಲಿ ಕನಕಪುರದ ರೂರಲ್ ಕಾಲೇಜು, ಬೆಂಗಳೂರಿನ ಸೆಯಿಂಟ್ ಜೋಸೆಫ್ಸ್ ಕಾಲೇಜು ಹಾಗೂ ಉಸ್ಮಾನಿಯಾ ವಿಶ್ವವಿದ್ಯಾನಿಲಯಗಳಲ್ಲಿ ಒಂದೂವರೆ ದಶಕ ಕನ್ನಡ ಅಧ್ಯಾಪಕರಾಗಿದ್ದರು (1955-1968). ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿ (19984-1994). ಅದೇ ಸಂಸ್ಥೆಯ ನಿರ್ದೇಶಕರಾಗಿ (1991-1993) ನಿವೃತ್ತರಾದರು. ಅವರು ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು (1997). ಬಿ.ಎಂ.ಶ್ರೀ ಪ್ರತಿಷ್ಠಾಪನದ ಅಧ್ಯಕ್ಷರಾಗಿದ್ದರು.

ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು, ಗ್ರಂಥಸಂಪನೆ, ನಿಘಂಟುರಚನೆ, ಸಾಹಿತ್ಯ ಚರಿತ್ರೆ ಮೊದಲಾದ ಶಾಸ್ತ್ರ ಕ್ಷೇತ್ರಗಳಲ್ಲಿ ಶಾಸ್ತ್ರಿಗಳು ದೈತ್ಯ ಕೆಲಸ ಮಾಡಿದ್ದಾರೆ.  ಈ ಕ್ಷೇತ್ರಗಳಲ್ಲಿ ಅವರಿಗೆ ಸರಿದೂಗುವ ಕೆಲಸ ಮಾಡಿರುವವರು ಇಂದು ಕಡಿಮೆ. ಈವರೆಗೂ ಅವರು ಸ್ವತಂತ್ರವಾಗಿ, ಸಂಪಾದಕರಾಗಿ, ಜೊತೆಸಂಪಾದಕರಾಗಿ, ಅನುವಾದಕರಾಗಿ, ಸೂಚಿಕಾರರಾಗಿ, ನಾಟಕಕಾರರಾಗಿ, ಪ್ರಬಂಧಕಾರರಾಗಿ, ಜೀವನ ಚರಿತ್ರಕಾರರಾಗಿ, ಸುಮಾರು 70ಕೃತಿಗಳನ್ನು ರಚಿಸಿದ್ದಾರೆ. 500ಕ್ಕೂ ಹೆಚ್ಚು ಲೆಖನ ಬರೆದಿದ್ದಾರೆ. ಶಬ್ದಮಣಿದರ್ಪಣಂ, ದರ್ಪಣ ವಿವರಣ, ಹೊಸಗನ್ನಡದ ವ್ಯಾಕರಣ ಅವರ ವ್ಯಾಕರಣ ಕೃತಿಗಳು; ಕನ್ನಡ ಛಂದಸ್ಸು, ಕನ್ನಡ ಛಂದಃಸ್ವರೂಪಕನ್ನಡ ಛಂದೋವಿಹಾರ ಅವರ ಛಂದಸ್ಸಿನ ಪುಸ್ತಕಗಳು; ಕನ್ನಡ ಚಿತ್ರಕಾವ್ಯ, ಮಹಾಕಾವ್ಯಲಕ್ಷಣ ಅವರ ನಿಘಂಟು ರಚನೆಗಳು; ಶಬ್ದಾರ್ಥವಿಹಾರಗ್ರಂಥಸಂಪಾದನ ಪರಿಭಾಷಕೋಶ ಅವರ ಗ್ರಂಥಸಂಪಾದನೆಯ ಕ್ಷೇತ್ರದ ಬರೆವಣಿಗೆಗಳು; ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ, ಚಾಮುಂಡರಾಯ, ನಮ್ಮ ಕರ್ನಾಟಕ, ಪ್ರಾಚೀನ ಕನ್ನಡ ಸಾಹಿತ್ಯ, ಕೆಲವು ನೋಟಗಳು, ಮೂರು ಸಮೀಕ್ಷೆಗಳು, ಸಾಹಿತ್ಯ ಮಂಥನ, ಹಳೆಯಹೊನ್ನು, ಹೊಸಗನ್ನಡದ ಸಾಹಿತ್ಯ, ಕೆಲವು ನೋಟಗಳು ಅವರ ಸಂಶೋಧನ-ಸಮೀಕ್ಷೆ-ವಿಮರ್ಶನ ಬರೆಹ ಹೊಂದಿವೆ. ಈ ಬಹುಪಾಲು ಕೃತಿಗಳಲ್ಲಿ ಶಾಸ್ತ್ರಿಗಳ ಹಳಗನ್ನಡ ಭಾಷೆ-ಸಾಹಿತ್ಯಗಳ ಆಳವಾದ ಪರಿಚಯ, ಖಚಿತ ತಿಳಿವಳಿಕೆ, ತೂಕದ ಪಾಂಡಿತ್ಯಗಳನ್ನು ಪ್ರತಿಬಿಂಬಿಸುತ್ತವೆ. ಆಯಾ ಕ್ಷೇತ್ರಕ್ಕೆ ಸಂಭಂಧಿಸಿದ ಈ ಕೃತಿಗಳು ಪರಾಮರ್ಶನ ಕೃತಿಗಳಾಗಿವೆ. ಅವರ ಕೆಲವು ಕೃತಿಗಳ ಗುಣ—ಗಾತ್ರಗಳು ಒಬ್ಬ ವಿದ್ವಾಂಸನ ಒಂದು ಜೀವಮಾನದಲ್ಲೇ ಸಂಪೂರ್ಣಗೊಂಡಿರುವುದು ವಿಸ್ಮಯಜನಕವಾಗಿವೆ. ಇವು ಶಾಸ್ತ್ರಿಗಳ ನಿರಂತರ ವ್ಯಾಸಂಗ ಹಾಗೂ ಧಾರಣಶಕ್ತಿಗಳ ಕುರುಹೂ ಆಗಿವೆ.

ಶಾಸ್ತ್ರಗಳು ಹೊಸಗನ್ನಡದ ಅರುಣೋಧಯ ಕಾಲದ ಬಗ್ಗೆ ಮಡಿರುವ ಸಂಶೋಧನೆ ವಿಶೇಷ ಉಲ್ಲೇಖಕ್ಕೆ ಪಾತ್ರವಾಗುವಂಥದ್ದು. ಅವರು ಎಸ್.ಜಿ.ನರಸಿಂಹಾಚಾರ್ಯರ ಕವಿತೆ, ಕಾವ್ಯ ಸಂಕಲಿಸಿದ್ದಾರೆ. ಜಯಾರಾಯಾಚಾರ್ಯರ ಅನುಕರಣಗೀತಲಹರಿ ಸಂಪಾದಿಸಿಕೊಟ್ಟಿದ್ದಾರೆ. ಆರ್. ನರಸಿಂಹಾಚಾರ್ಯರ, ಎ. ವೆಂಕಟಸುಬ್ಬಯ್ಯನವರ ವಿದ್ವತ್ಲೇಖನ ಒಗ್ಗೂಡಿಸಿಕೊಟ್ಟಿದ್ದಾರೆ. ಎಂ. ಶಾಮರಾವ್, ಆರ್.ಶಾಮಶಾಸ್ತ್ರಿ, ಎಸ್.ಜಿ. ಶಾಸ್ತ್ರಿ, ಭಾಗವತದ ಸುಬ್ಬರಾಯರು ಮುಂತಾದ ಆದ್ಯರ ಬಗ್ಗೆ ಅವರು ತಿಳಿಸಿಕೊಟ್ಟಿರುವ ಸಂಗತಿಗಳು ತುಂಬಾ ಉಪಯುಕ್ತವಾದವು. ಅವರು ತಮ್ಮೆಲ್ಲರ ಮುಖ್ಯ ಲೇಖನಗಳನ್ನು ಶಾಸ್ತ್ರೀಯ ಶೋಧ ಎಂಬ ಹೆಸರುಗಳಲ್ಲೂ ಸಂಕಲಿಸಿದ್ದಾರೆ. ಈ ಪ್ರತಿಯೊಂದು ಸಂಪುಟಗಳ ವ್ಯಾಪ್ತಿ ಸುಮಾರು 600 ಪುಟಗಳದ್ದಾಗಿದೆ. ಇವು ಅವರ ವಿದ್ವತ್ತಿನ ಬಹುಜ್ಜತೆ ಹಾಗೂ ಬರೆವಣಿಗೆಯ ಅಗಾಧತೆಗೆ ನಿದರ್ಶನವಾಗಿವೆ. ಇದಲ್ಲದೆ ಅವರು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ಐದು ಸಂಪುಟಗಳನ್ನು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಸಮಿತಿಯ ಸದಸ್ಯರಾಗಿ, ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿದ್ದರಲ್ಲದೆ ಹಲವಾರು ಸಾಹಿತ್ಯಕ, ಸಾಂಸ್ಕøತಿಕ ಸಮಿತಿಗಳ ಸದಸ್ಯರಾಗಿದ್ದಾರೆ.

	ತಮ್ಮ ಘನವಾದ ಕೆಲಸಕ್ಕಾಗಿ, ಬೆಲೆಬಾಳುವ ಸಂಶೋಧನೆಗಾಗಿ ಶಾಸ್ತ್ರಿಗಳು ಹಲವಾರು ಬಹುಮಾನ, ಪ್ರಶಸ್ತಿ, ಗೌರವ ಪಡೆದಿದ್ದಾರೆ. ದೇವಾರಾಜ ಬಹಾದದೂರ್ ಬಹುಮಾನ, ತೀ-ನಂ-ಶ್ರೀ ಸ್ಮಾರಕ ಬಹುಮಾನ ಪಿಬಿಎಚ್ ಶಿಕ್ಷಣ ಟ್ರಸ್ಟ್ ಬಹುಮಾನ, ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್‍ಗಳಿಂದ ಪುರಸ್ಕøತರಾಗಿದ್ದಾರೆ. ಅವರ ಗೆಳೆಯರು ಅಭಿಮಾನಿಗಳು ಶಿಷ್ಯರು ಅವರಿಗೆ ಶ್ರೀಮುಖ ಎಂಬ ಅಭಿನಂದನ ಗ್ರಂಥ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಶಾಸ್ತ್ರಗಳು ಕನ್ನಡ ಸಂಶೋಧನ ಕ್ಷೇತ್ರದ ಧ್ರುವನಕ್ಷತ್ರ.
									(ಎನ್.ಎಸ್.ತಾರಾನಾಥ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ